"ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ" ಅಭಿಯಾನ, ಮೇ - 2010
2010ರ ಮೇ ತಿಂಗಳಿನಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆಯಾಯಿತು. ಆದರೆ ಚುನಾವಣಾ ಸಮಯದಲ್ಲಿ ಮತದಾರರು ರಾಜಕೀಯ ಪಕ್ಷಗಳು, ಚುನಾವಣಾ ಅಭ್ಯರ್ಥಿಗಳು ತೋರಿಸಬಹುದಾದ ಹಣ, ಹೆಂಡ, ಸೀರೆ ಮುಂತಾದ ಆಮಿಷಕ್ಕೆ ಒಳಗಾಗಿ ತಮ್ಮನ್ನು, ತಮ್ಮ ಮತಗಳನ್ನು ಮಾರಿಕೊಳ್ಳುವಂತಹ ದುರಂತದ ವಾತಾವರಣ ಎಲ್ಲೆಡೆ ನಿರ್ಮಾಣವಾಗಿತ್ತು. ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಜನಜಾಗೃತಿ ಮೂಡಿಸಲು, ಈ ಕೆಟ್ಟ ಪದ್ಧತಿಯ ವಿರುದ್ಧ ಧ್ವನಿ ಎತ್ತಲು ರಾಜ್ಯದಾದ್ಯಂತ "ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ" ಹಾಗೂ "ಗೌರವಾನ್ವಿತ ಮತದಾರರ ಸ್ವಾಭಿಮಾನಿ ಹೋರಾಟ" ಅಭಿಯಾನ ನಡೆಸಿತು. ಈ ಆಂದೋಲನಕ್ಕೆ ರಾಜ್ಯದೆಲ್ಲೆಡೆ ಅಭೂತಪೂರ್ವ ಪ್ರೋತ್ಸಾಹ ಸಿಕ್ಕಿತು. ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವನ್ನು ಬೆಂಬಲಿಸುವ ಅನೇಕರು, ಇದರ ತತ್ವದಂತೆ ಯಾವುದೇ ಆಸೆ-ಆಮಿಷ ಒಡ್ಡದೇ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು.